ಆಲ್ಜೀರಿಯ
ಆಫ್ರಿಕದ ಉತ್ತರ ಭಾಗದಲ್ಲಿರುವ ಗಣರಾಜ್ಯ. ಪಶ್ಚಿಮದಲ್ಲಿ ಮೊರಾಕೊ ಮತ್ತು ಸ್ಪಾನಿಷ್ ಸಹರ, ದಕ್ಷಿಣದಲ್ಲಿ ಫ್ರೆಂಚರ ಪಶ್ಚಿಮ ಆಫ್ರಿಕ, ಪೂರ್ವದಲ್ಲಿ ಲಿಬಿಯ ಮತ್ತು ಟ್ಯುನೀಷಿಯ, ಉತ್ರರದಲ್ಲಿ ಮೆಡಿಟರೇನಿಯನ್ ಸಮುದ್ರಗಳಿಂದ ಆವೃತವಾಗಿದೆ. ಓರಾನ್, ಆಲ್ಜಿಯರ್ಸ್ ಮತ್ತು ಕಾನ್ಸ್ಟೆಂಟೈನ್ ಪ್ರಾಂತ್ಯಗಳನ್ನೊಳಗೊಂಡಂತೆ ಇದರ ವಿಸ್ತೀರ್ಣ 9,19,352 ಚ.ಮೈ. ಜನಸಂಖ್ಯೆ 1,21,50,000 (1966). ಬಹುಭಾಗ ಮುಸ್ಲಿಮರು. 

ಇಲ್ಲಿ ಹಿತಕರವಾದ ವಾಯುಗುಣವಿದೆ. ಬೇಸಗೆಯಲ್ಲಿ ಹೆಚ್ಚು ಬಿಸಿಲಿನತಾಪವಿದ್ದರೂ ರಾತ್ರಿವೇಳೆ ತಂಪಾಗಿರುತ್ತದೆ. ಮಳೆಯೂ ಸಾಕಷ್ಟು ಆಗುವುದರಿಂದ ಉತ್ರಮವಾದ ವ್ಯವಸಾಯಕ್ಕೆ ಅನುಕೂಲವಾಗಿದೆ.

ಆಲ್ಜೀರಿಯ ಭೌತಿಕವಾಗಿ ಟೆಲ್ ಅಟ್ಲಾಸ್ ಮತ್ತು ಸಹರದ ಅಟ್ಲಾಸ್ ಎಂಬ ಎರಡು ಸಮಾನಾಂತರ ಶ್ರೇಣಿಯಿಂದ ಕೂಡಿದೆ. ಇವುಗಳ ನಡುವೆ ಇರುವುದು ಷಾಟ್ಸ್ ಪ್ರಸ್ಥಭೂಮಿ ; ಇದರಲ್ಲಿ ಭೂಕುಸಿತದಿಂದಾದ ಕೆಲವು ಪ್ರದೇಶಗಳು ನೀರು ಬಸಿಯುವ ಕಾಲುವೆಗಳಾಗಿವೆ. ದಕ್ಷಿಣದಲ್ಲಿ 1500 ಗಳಿಗಿಂತ ಕಡಿಮೆ ಎತ್ರರದ ಸಹರ ಪ್ರದೇಶವಿದೆ.

ಮೆಡಿಟರೇನಿಯನ್ ವಾಯುಗುಣವಿರುವ ಉತ್ತರದ ಇಕ್ಕಟ್ಟಾದ ತೀರಪ್ರದೇಶದಲ್ಲಿ ವ್ಯವಸಾಯವೇ ಜನರ ಮುಖ್ಯ ಕಸಬು ; ಇಲ್ಲಿ ದೇಶೀಯ ರೈತರು ಆಹಾರಧಾನ್ಯಗಳು, ಅಲಿವ್ ಗಿಡಗಳು, ಎಸ್ಪಾರ್ಟೊ ಹುಲ್ಲು ಮತ್ತು ಕಾರ್ಕ್ ಮರಗಳನ್ನು ಬೆಳೆಸುತ್ತಾರೆ ; ದನಕರುಗಳನ್ನು ಸಾಕುತ್ತಾರೆ. ಐರೊಪ್ಯ ನಿವಾಸಿಗಳು ಮದ್ಯ, ತರಕಾರಿ, ಹಣ್ಣು, ಹೊಗೆಸೊಪ್ಪು ಮತ್ತು ಹತ್ತಿಯನ್ನು ಉತ್ಪಾದಿಸುತ್ತಾರೆ. ರಫ್ತಾಗುವ ಪದಾರ್ಥಗಳಲ್ಲಿ ಅರ್ಧಭಾಗ ದ್ರಾಕ್ಷಾರಸ ; ಉಳಿದ ವಸ್ತುಗಳು ಕಬ್ಬಿಣದ ಅದುರು, ಹಣ್ಣುಗಳು ಮತ್ತು ತರಕಾರಿಗಳು.

ಧಾನ್ಯವನ್ನು ಹಿಟ್ಟು ಮಾಡುವುದು, ಶೋಧಿಸುವುದು, ಹಣ್ಣುಪಾಕ ಮತ್ತು ಹೊಗೆಸೊಪ್ಪು ತಯಾರಿಕೆ-ಇವೇ ಮುಖ್ಯ ಕೈಗಾರಿಕೆಗಳು. ಇವೆಲ್ಲ ಹೆಚ್ಚಾಗಿ ಸಮುದ್ರತೀರಪ್ರದೇಶದಲ್ಲೇ ಇವೆ. ಬೃಹತ್ ಕೈಗಾರಿಕೆಗಳು ಅಲ್ಪವಾಗಿದ್ದರೂ ರಾಸಾಯನಿಕ ವಸ್ತುಗಳು, ಸಿಮೆಂಟು, ಬಟ್ಟೆಬರೆಗಳು, ಸಕ್ಕರೆ ಮುಂತಾದುವು ತಯಾರಾಗುತ್ತವೆ ; ಇವಕ್ಕೆ ವಿದ್ಯುಚ್ಛಕ್ತಿಯ ಅನುಕೂಲತೆ ಇದೆ.	  (ಪಿ.ಕೆ.ಎಸ್.) 

1830 ರಲ್ಲಿ ಫ್ರಾನ್ಸ್ ಇದನ್ನು ಆಕ್ರಮಿಸಿ ಕ್ರಮೇಣ ಇತರ ನೆರೆಹೊರೆಯ ಪ್ರದೇಶಗಳ ಮೇಲೂ ತನ್ನ ಪ್ರಭಾವವನ್ನು ಬೀರಿತು. 1870ರ ಅನಂತರ ಆಲ್ಜೀರಿಯ ಫ್ರಾನ್ಸಿನ ಆಡಳಿತಕ್ಕೆ ಒಳಪಟ್ಟಿತು. ಸಹರ ಪ್ರದೇಶ ಮಾತ್ರ ಸೈನಿಕ ಆಡಳಿತದಲ್ಲಿ ಉಳಿದುಕೊಂಡಿತು. ಎಂಟು ವರ್ಷಗಳಿಗೂ ಹೆಚ್ಚು ಕಾಲ ನಡೆಸಿದ ಹೋರಾಟದ ಅನಂತರ 1962ರಲ್ಲಿ ಆಲ್ಜೀರಿಯ ಸ್ವಾತಂತ್ರವನ್ನು ಗಳಿಸಿಕೊಂಡಿತು. ಅಲ್ಲಿನ ಹೋರಾಟ ಭಾರತದ ಸ್ವಾತಂತ್ರ ಸಮರವನ್ನು ನೆನಪಿಗೆ ತರುವಂಥದು. 

ಸ್ವಾತಂತ್ರ್ಯ ಪೂರ್ವದಲ್ಲಿ ಆಲ್ಜೀರಿಯದಲ್ಲಿ ಬಂದು ನೆಲೆಸಿದ್ದ ಯೂರೋಪೀಯರ ಸಂಖ್ಯೆ ಸುಮಾರು 10 ಲಕ್ಷದಷ್ಟಿತ್ತು. ಇದರಲ್ಲಿ ಅರ್ಧದಷ್ಟು ಜನ ಫ್ರೆಂಚರು. ಸ್ವಾತಂತ್ರ ಬಂದಾಗಿನಿಂದ ಸಹಸ್ರಾರು ಯೂರೋಪೀಯರು ಈ ದೇಶವನ್ನು ಬಿಟ್ಟು ಹೋದರು. ಉಳಿದವರು ಸ್ಥಳೀಯ ರೈತರುಗಳಿಗಿಂತ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿದರು. 

ನಿರುದ್ಯೋಗ ನಿವಾರಣೆಯಾಗುವಂತೆ ದೇಶದ ಆರ್ಥಿಕ ಜೀವನವನ್ನು ರೂಪಿಸುವುದೇ ಅಲ್ಜೀರಿಯದ ಮುಖ್ಯ ಉದ್ದೇಶವಾಗಿದೆ. ಸದ್ಯಕ್ಕೆ ಜನ ಉದ್ಯೋಗಾಭಿಲಾಷಿಗಳಾಗಿ ಫ್ರಾನ್ಸಿಗೆ ಹೋಗಿ ನೆಲೆಸುತ್ತಿದ್ದಾರೆ. 

ಓರಾನ್ (ಜನಸಂಖ್ಯೆ 3,93,000) ಪಶ್ಚಿಮ ಅಲ್ಜೀರಿಯದ ಮುಖ್ಯ ಬಂದರು. ಇಲ್ಲಿಂದ ರಫ್ತು ಮಾಡಲಾಗುವ ವಸ್ತುಗಳಲ್ಲಿ ಮುಖ್ಯವಾದುವು ದ್ರಾಕ್ಷಾರಸ, ಕಾಳು, ಎಸ್ಪಾರ್ಟೊ ಹುಲ್ಲು ಮತ್ತು ಕುರಿ. 					   
 (ಕೆ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ